ಬುಧವಾರ, ನವೆಂಬರ್ 25, 2015


ಬಹಳ ಹಿಂದೆ...  
ಪ್ರೇಮಿಯೊಬ್ಬ 
ನನ್ನದು ಅನ್ನಿಸೋ 
ಬದುಕು ಬೇಕು,
ಇಬ್ರೇ ಇರೋಣ,
ಎಂಬ ಹಠಕ್ಕೆ ಬಿದ್ದಿದ್ದ,
ಆದ್ರೆ ಹಾಗಾಗಲಿಲ್ಲ.

ಪ್ರೀತಿ ಸಿಗಲಿಲ್ಲ,
ಬೇರೆಯವರಿಗಾಗಿ ಬದುಕಿದ,
ಗೌರವ ಸಿಗ್ತು,
ತಿಳಿಹೇಳುವ ಪಣತೊಟ್ಟ,
ತನ್ನ ಹಠ ಬಿಟ್ಟ,
ಇವತ್ತು ಅವನು 
"ತತ್ವಜ್ಞಾನಿ"

  - 'ಜೀವಿ'  
©  (ಗುರುಪ್ರಸಾದ ಹೆಗಡೆ)


ಸೋಮವಾರ, ಜೂನ್ 2, 2014

ಸೋಮವಾರ, ಜುಲೈ 22, 2013

ಮಂಗಳವಾರ, ಮೇ 28, 2013

!---------- ಸಿದ್ದು ಪೋಯಂ --------!

ಕಾವೇರಿ ನಿಲಯಂ 
ಖಾಲಿ ಆಲಯಂ 
ಖುರ್ಚಿ ಭಯಂ 
ಸಂಪೂರ್ಣ - ಕಾರಣಂ!

- 'ಜೀವಿ' ©  (ಗುರುಪ್ರಸಾದ ಹೆಗಡೆ) 

ಸಂದರ್ಭ: ಸಿದ್ದು - ಸೀಎಂ ನಿವಾಸ 'ಕಾವೇರಿ' ಗೆ ಹೋಗಲ್ವಂತೆ; 
ಹಿಂದೆ ಡೀ.ಸಿ.ಎಂ ಆಗಿದ್ದಾಗ ಅಲ್ಲಿ ಇದ್ದು ಹುದ್ದೆ ಕಳ್ಕೊಂಡಿದ್ರು!!!

ಸೋಮವಾರ, ಮೇ 27, 2013

ಕೊನೆಯ ಕ್ಷಣ.

ಬಾಗಿಲು ತೆರೆದಿಡಿ
ಹೋಗ ಬೇಕಿದೆ ನಾನು
ಎಂದ ನನ್ನ ಅಜ್ಜ
ನಿಜಕ್ಕೂ ಹೊರಟು
ಹೋಗಿಯೇ ಬಿಟ್ಟ,

ಎಲ್ಲರಿಗೂ ಲಭಿಸದ
ಸುಲಭ ಸಾವು ಅದು
ಕರ್ತವ್ಯ ಪೂರೈಸಿದ
ಅಧಿಕಾರಿ ನಿವೃತ್ತಿಯ
ದಿನ ಕಛೇರಿ ಬಿಟ್ಟಂತೆ,

ನನಗೂ ಅಂಥ
ಸಾವು ಬಂದರೆ
ಖಂಡಿತ ಬೇಡ
ಎನ್ನಲಾರೆ, ಸಾರ್ಥಕ
ಜೀವನದ ಕೊನೆಯ
ಕ್ಷಣವದು...!

------ 'ಜೀವಿ'  ©  (ಗುರುಪ್ರಸಾದ ಹೆಗಡೆ)




ಸೋಮವಾರ, ಮೇ 20, 2013

Tell 'me' love

Tell me,
if you think
you know -
how to live
without me!


There are many
who'r' in sadness
without you -
yeah 'love!'
like me..


Help
the'm'e to
come over, to
start al'love'r -
again!


Tell me...
help me...
if you can -
'love me'!?


- Guruprasad Hegde ©

ಭಾನುವಾರ, ಏಪ್ರಿಲ್ 21, 2013

ಬೆಂಗಳೂರು ಸ್ಪೋಟದ ಸುತ್ತ



ಎಚ್ ವಿಶ್ವನಾಥ ಎಂದರೆ 
ಗುರುತು ಹಿಡಿವುದು ಕಷ್ಟ;
ಅದೇ ಹುಚ್ಚು ವಿಶ್ವನಾಥ 
ಅಂದ್ರೆ! ಥಟ್ಟನೆ ಒಹ್;
ಅವ್ನಾ ಅಂತಾರೆ - ಜನ. 

ಎಲ್ಲಿದ್ದನೋ ಇಷ್ಟು ದಿನ?
ಇವತ್ತು ಮತ್ತೆ ಬಂದಿದ್ದಾನೆ. 
ಸುಮ್ಮನಿರಲಾರದೆ
ಇರುವೆ ಬಿಟ್ಟುಕೊಂಡಿದ್ದಾನೆ

ಸ್ಪೋಟದ ಹಿಂದೆ
ಸಂಘದ ಕೈವಾಡ
ಇದೆ ಎಂದು ಹೇಳಿದವನು
ಹುಚ್ಚನಲ್ಲದೆ ಮತ್ತಿನ್ನೇನು?




- ಗುರುಪ್ರಸಾದ ಹೆಗಡೆ (G.V.HEGDE/'ಜೀವಿ')


ಬುಧವಾರ, ಮಾರ್ಚ್ 13, 2013

ನೋವಿ'ನಲ್ಲಿ'!

ಊರ ಬೀದಿಯಲಿ
ವೃದ್ಧ ಕೊಳಾಯಿ
ಒಂದೇ ಸಮನೆ
- ಬಿಕ್ಕುತ್ತಿದೆ;
ನೇವರಿಸುವರಿಲ್ಲ,
ಕಣ್ಣೊರೆಸುವವರಿಲ್ಲ.

ಜನರ ತಾತ್ಸಾರಕೆ
ಕೊನೆಯುಂಟೇ..?
ನಿಂತು - ನೋಡಿಯೂ
ಹಾಗೇ ಸಾಗುತಿಹರು
ಕಂಡರೂ ಕಾಣದಂತೆ.
ಬಳಿ ಸುಳಿವರಾರಿಲ್ಲ.

ತನ್ನನ್ನೇ ಹಿಂಡಿಕೊಂಡು
ಸಿಹಿನೀರ ಕೊಟ್ಟದ್ದು,
ಬಳಲಿ ಬಂದವರ
ಆಸರು ನೀಗಿದ್ದು,
ಕಣ್ಣ ಮುಂದೆಯೇ ಇದೆ;
ನೊಂದು ನರಳಿದೆ 'ನಳ'

ಇದರ ಕಥೆ ಮುಗಿಯಿತು
ಬದಲಾಯಿಸ ಬೇಕು -
ಎಂಬುದಷ್ಟೇ ಕೇಳಿಸಿತು,
ಕಣ್ಣಂಚಿನ ಕೊನೆಯಹನಿ
ಉರುಳುವಾಗ ಕೊರಳ ಸೆರೆ
ಉಬ್ಬಿಬಂತು - "ಜನ ಮರೆತರೇ"?

ನಾಳೆ ಇದೇ ದಾರಿಯಲಿ
ನಡೆದು ಬರುವಾಗ
ಕಾಣಬಹುದು ಹೊಸದು,
ನಳ - ನಳಿಸುವ ನಲ್ಲಿ;
ಆದರೆ ಇದೆಲ್ಲಿ -
ಬಿಕ್ಕುತಿರುವುದೋ ನೋವಿ'ನಲ್ಲಿ'?

- ಗುರುಪ್ರಸಾದ ಹೆಗಡೆ

ಫೋಟೋ ಕೃಪೆ: ಗಿರೀಶ ಹೆಗಡೆ
ಫೇಸ್ಬುಕ್ ಪೇಜ್: Hegde Photography (ಲೈಕ್ ಮಾಡಿ!)

ಮಂಗಳವಾರ, ಫೆಬ್ರವರಿ 12, 2013

ಭರತನಾಟ್ಯದಲ್ಲಿ ಬರವಸೆಯ ಬೆಳಕು ವಿದುಷಿ. ಕು. ಮಂಜುಶ್ರೀ. ವಿ.


ಮಲೆನಾಡ ಮಡಿಲು 'ಶಿರಸಿ'ಯ ಹೆಮ್ಮೆಯ ಕಲಾವಿದೆ ವಿದುಷಿ ಕು. ಮಂಜುಶ್ರೀ. ವಿ. ಭಾರತದ ನೃತ್ಯ ಪ್ರಾಕಾರಗಳಲ್ಲಿ ಭರತನಾಟ್ಯಕ್ಕೆ ಉನ್ನತ ಸ್ಥಾನವಿದೆ. 'ನೃತ್ಯ ಸೇವಾ ಅವಧಾರಯ' ಎಂದು ಹೇಳಿರುವುದು ದೇವರಿಗೆ ನಾಟ್ಯ ಸೇವೆಯ ಮೇಲೆ ಪ್ರೀತಿ ಎಂಬ ಕಾರಣಕ್ಕೇ. ಕಲಾಪ್ರಿಯ ಹಾಗೂ ಸುಸಂಸ್ಕೃತ ಕುಟುಂಬದ ಶ್ರೀ. ವೆಂಕಟ್ರಮಣ ಎಂ ಹಾಗೂ ಶ್ರೀಮತಿ ರೇಣುಕಾ ಅವರ ಪುತ್ರಿ ಮಂಜುಶ್ರೀ. ವಿ ತಮ್ಮ ಆರರ ಎಳೆಯ ವಯಸ್ಸಿನಲ್ಲೇ ನೃತ್ಯವನ್ನು ಕಲಿಯಲು ಆರಂಬಿಸಿದರು. ತಂದೆ-ತಾಯಿಯರ ಪ್ರೋತ್ಸಾಹ, ಹಾಗೂ ಉತ್ತಮ ಗುರುಗಳ ಮಾರ್ಗದರ್ಶನ ದೊರಕಿತು, ಜೊತೆಗೆ ತಮ್ಮ ಕpಣ ಪರಿಶ್ರಮದ ಮೂಲಕ ಭರತನಾಟ್ಯ, ಕುಚುಪುಡಿ, ಹಾಗೂ ಮೋಹಿನಿ ಅಟ್ಟಂ ಕಲಾ - ಪ್ರಾಕಾರಗಳನ್ನೆಲ್ಲ ಶೃದ್ಧೆಯಿಂದ ಕಲಿತರು. ಈಗ ಕಲಾಪ್ರಸಾರ ನಿರತರಾಗಿರುವ ಮಂಜುಶ್ರೀ ಅವರು ನೃತ್ಯ ಪ್ರದರ್ಶನ, ಬರವಸೆಯ ಕುಡಿಗಳಿಗೆ ಮಾರ್ಗದರ್ಶನ ಮಾಡುತ್ತ ನಟರಾಜನ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ. 


ಗುರುಗಳು: ವಿದುಷಿ ಶ್ರೀಮತಿ. ಸೀಮಾ ಭಾಗವತ, ವಿದುಷಿ. ಶ್ರೀಮತಿ ಸಹನಾ ಭಟ್, ವಿದುಷಿ ಶ್ರೀಮತಿ ಸತ್ಯಭಾಮಾ ಕುಟ್ಟಿ, ಮತ್ತು ವಿಧ್ವಾನ್ ಶ್ರೀ. ಜನಾರ್ಧನ ಅಯ್ಯರ್ ಇವರೆಲ್ಲರ ಮಾರ್ಗದರ್ಶನ ಪಡೆದಿದ್ದಾರೆ ಮಂಜುಶ್ರೀ. 2006ರ ಮಾರ್ಚ್ ಐದರಂದು ರಂಗಪ್ರವೇಶ ಮಾಡಿದ ನಂತರ ಸಾಧನೆಯ ದಿಟ್ಟ ಹಾದಿಯಲ್ಲಿ ನಡೆದವರು ಮಂಜುಶ್ರೀ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಓದುತ್ತಿರುವಾಗಲೇ ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನೃತ್ಯೋತ್ಸವದಲ್ಲಿ ಬಂಗಾರದ ಪದಕ ಅರಸಿಬಂತು, ಹಾಗೆಯೇ ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಹಾಗೂ 'ವಿಧ್ವತ್' ಶಿಕ್ಷಣವನ್ನೂ ಪಡೆದರು. ಅಂದಹಾಗೆ ಮಂಜುಶ್ರೀ ಸೋಷಿಯಾಲಜಿ ಎಂ.ಎ ಪದವೀಧರೆ ಕೂಡ!   


ದೇಶ-ವಿದೇಶಗಳ ವಿವಿದೆಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿ ಕಲಾರಸಿಕರ ಹೃದಯ ಗೆದ್ದಿದ್ದಾರೆ ಮಂಜುಶ್ರೀ. ಪ್ರಖ್ಯಾತ ಮೈಸೂರು ದಸರಾ, ಬನವಾಸಿಯ ಕದಂಬೋತ್ಸವ, ಕರಾವಳಿ ಉತ್ಸವ, ಚಾಲುಕ್ಯೋತ್ಸವ, ಶರನ್ನವರಾತ್ರಿ ಉತ್ಸವ, ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ, ಗುಜರಾತಿನಲ್ಲಿ ನಡೆದ ಸಾಂಸ್ಕೃತಿಕ ಸಮ್ಮೇಳನ, ಕೇರಳದ ಕಿಂಕಿಣಿ ಉತ್ಸವ, ಮುಂಬೈಯಲ್ಲಿ ನಡೆದ ಮಲ್ಹಾರ ಉತ್ಸವ, ಜೈಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಉತ್ಸವ, ಮತ್ತು ಭುವನೇಶ್ವರದ ಉತ್ಕರ್ಷ ಉತ್ಸವ ಮೊದಲಾದವುಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ರಾಜ್ಯದಲ್ಲಿ ಶಿರಸಿ, ಮೈಸೂರು, ಬೆಂಗಳೂರು, ಗುಲ್ಬರ್ಗ, ಕೊಲ್ಲೂರು, ಉಡುಪಿ, ಮಡಿಕೇರಿ, ಬಾದಾಮಿ ಹಾಗೂ ಮತ್ತಿತರೆಡೆ ನಾಟ್ಯ ಪ್ರದರ್ಶನಗೈದಿದ್ದಾರೆ. ಬಹರೈನ್ ದೇಶದ ಮನಾಮದಲ್ಲಿ ವಿಶ್ವ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ - 2006 ಮತ್ತು ಕುವೈತ್ ಅಲ್ಲಿ ನಡೆದ ವಿಶ್ವ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ - 2007ರಲ್ಲಿ ಭಾಗವಹಿಸಿ ವಿದೇಶಿ ನೆಲದಲ್ಲೂ ಅಪ್ಪಟ ಭಾರತೀಯ ಕಲೆಯನ್ನ ಪ್ರಚುರಪಡಿಸಿದ್ದಾರೆ.


ಬಿರುದು - ಸಮ್ಮಾನಗಳು: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಟಾನವು 'ಆರ್ಯಭಟ ಪ್ರಶಸ್ತಿ' ನೀಡಿ ಗೌರವಿಸಿದೆ, ಡಾ. ಪಂಡಿತ ಪುಟ್ಟರಾಜ ಯುವ ಪ್ರತಿಭಾ ಪುರಸ್ಕಾರ ರಾಜ್ಯ ಪ್ರಶಸ್ತಿ, ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಅಮೋಘವರ್ಷ ನೃಪತುಂಗ ಪ್ರಶಸ್ತಿ, ಸಾಧನಾ ರತ್ನ, ನಾಟ್ಯ ಮಯೂರಿ,ಕರುನಾಡ ಸಿರಿ, ಕರುನಾಡಿನ ಹೆಮ್ಮೆಯ ರತ್ನ, ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರ ಸದ್ಭಾವನಾ ಪ್ರಶಸ್ತಿಗಳು ಕಲಾವಿದೆಯ ಸಾಧನೆಯನ್ನ ಗುರುತಿಸಿ ಮುಡಿಯೇರಿವೆ. 

ಮಂಜುಶ್ರೀಯವರು ನೂಪುರ ನೃತ್ಯ ಕುಟೀರ ಸಂಸ್ಥೆಯ ಸ್ಥಾಪಕ - ನಿರ್ದೇಶಕಿ, ಇನ್ನೂರಕ್ಕೂ ಹೆಚ್ಚು ನೃತ್ಯಾಸಕ್ತ ವಿದ್ಯಾರ್ಥಿಗಳ ಮಾರ್ಗದರ್ಶನದ ಹೊಣೆ ಹೊತ್ತಿದ್ದಾರೆ. ಇವರ ವಿದ್ಯಾರ್ಥಿಗಳು ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ನೃತ್ಯ-ತಾಳ ಪರೀಕ್ಷೆ, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ನೃತ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರು ನಿರ್ದೇಶಿಸಿದ ಅನೇಕ ನೃತ್ಯ - ರೂಪಕಗಳು ಕಲಾವಿಮರ್ಶಕರಿಂದ ಮೆಚ್ಚುಗೆ ಪಡೆದಿರುತ್ತವೆ. ಬೆಂಗಳೂರಿನ ಗಾಯನಸಮಾಜದಲ್ಲಿ ಕಳೆದ ಡಿಸೆಂಬರ್ 1 ರಂದು ರಿಯಲ್'ಗುರು.ಕಾಂ ಪ್ರಸ್ತುತಪಡಿಸಿದ 'ಕೊಳಲು - ಕಿಂಕಿಣಿ - ಕಲ್ಪ' ಕಾರ್ಯಕ್ರಮದಲ್ಲಿ ಮಂಜುಶ್ರೀ ತಮ್ಮ ವಿದ್ಯಾರ್ಥಿನಿಯರ ಜತೆ ನೀಡಿದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತ್ತು. ನೃತ್ಯವನ್ನೇ ಉಸಿರಾಗಿಸಿಕೊಂಡಿರುವ ಮಂಜುಶ್ರೀ 'ನೂಪುರ ನೃತ್ಯ ಕುಟೀರ'ದ ಮೂಲಕ ಎಲ್ಲೆಡೆ ಕಲೆಯ ಕಂಪನ್ನು ಸೂಸಬೇಕೆಂದುಕೊಂಡಿದ್ದಾರೆ. ಬಡ, ಅಂಗವಿಕಲ, ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೂ ನೃತ್ಯಾಭ್ಯಾಸ ಮಾಡಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಮಂಜುಶ್ರೀಯವರ ಕನಸು - ಸಾಕಾರವಾಗಲೆಂದು ಹಾರೈಸೋಣ ಅಲ್ಲವೇ? ಮಿಂಚಂಚೆ: manjushreevnaik@gmail.com.  

- ಗುರುಪ್ರಸಾದ ಹೆಗಡೆ 

ಈ ಬರಹ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ: Read Article on Kannada Prabha



- ಗುರುಪ್ರಸಾದ ಹೆಗಡೆ 

ಶನಿವಾರ, ಜನವರಿ 12, 2013

ಹೈಕುಗಳು - 4

೧) ಬಹುದಿನದ ಬಳಿಕ
     ಭೇಟಿಯಾದರೂ
     ಜತೆಯಾದದ್ದು ಮೌನ

೨) ಮೋಡ ಕವಿದ
     ದಿನ ಕೂಡ
     ಮಳೆ ಬರಲಿಲ್ಲ

೩) ಮೊಟ್ಟೆಯೊಳಗಿನ
     ಗುಟ್ಟು ರಟ್ಟಾದ
     ದಿನ ಹುಟ್ಟಿದ್ದು ಹಕ್ಕಿ

೪) ಸಾಯಲು ಮಲಗಿದವ
     ಮತ್ತೇಕೋ ಎದ್ದು ಕೂತ,
     ಜನಕೆ ಗಾಬರಿಯಾಯ್ತು
     ಹೆದರಿ ಕರೆದರು 'ಭೂತ!'

೫) 'ಲಂಗ'ದ
     ಹುಡುಗಿಯ
     ಹಿಂದೆ ಬಿದ್ದವ
     'ಮಂಗ'ನಾದ!

೬) ನಿತ್ಯ ನೀರೆರೆದ 
     ಗುಲಾಬಿ ಗಿಡ
     ಹುಡುಗಿ ಸಿಕ್ಕ ದಿನ
     ಹೂ ಬಿಟ್ಟಿತು!

     - ಪ್ರಸಾದ್

ಸೋಮವಾರ, ಡಿಸೆಂಬರ್ 17, 2012

ಬದಲಾದ ಪರಿಸರ - ಹೊಂದಿಕೊಳ್ಳುವುದು ಹೇಗೆ?

ಇವತ್ತಿನ ಕನ್ನಡ ಪ್ರಭದ 'ರಂಗೋಲಿ' ಪುರವಣಿಯಲ್ಲಿ ನನ್ನ ಬರಹ: "Win ಇಂಗ್ಲಿಷ್ - ಹಳ್ಳಿ ಹುಡ್ಗಿ ಪ್ಯಾಟೇಗ್ ಬಂದ್ಲು.."
My article in today's 'Kannada Prabha' - Rangoli... http://www.kannadaprabha.com/pdf/18122012/20.pdf

Thanks 'Priya' for sharing your thoughts. I hope it will help those who are struggling.. 



ಸೋಮವಾರ, ನವೆಂಬರ್ 26, 2012

ಕನ್ನಡ ಪ್ರಭ ಪತ್ರಿಕೆಯ 'ಮಕರಂದ' ಪುರವಣಿಯಲ್ಲಿ ನನ್ನವೊಂದಿಷ್ಟು ಹೈಕು (ಹನಿಗವನಗಳು) ಪ್ರಕಟಗೊಂಡಿವೆ. ಪುಟ ಸಂಖ್ಯೆ ೧೯(Page No: 19). ಹೇಗಿವೆ ತಿಳಿಸುವಿರಾ?

Link : http://www.kannadaprabha.com/pdf/24112012/19.pdf

ಭಾನುವಾರ, ಸೆಪ್ಟೆಂಬರ್ 2, 2012

ನೀನು ಒಪ್ಪಿಕೊಳ್ತೀಯಾ ಅಂದ್ರೆ....., ಹೂಂ ಕಣೆ ಇದು 'ಪ್ರೇಮ ಪತ್ರ'!


ತೀರ ಕನಸಿಗಷ್ಟೇ ಬರ್ತಾ ಇದ್ದೋಳು, ಇತ್ತೇಚೆಗೆ ಒಂದೇ ಸಮನೆ ನೆನಪಾಗಿ ಕಾಡ್ತಾ ಇದೀಯಾ. ಮರೆಯಲು ಸಾಧ್ಯವಿಲ್ಲ ಅಂತ ಇಬ್ಬರಿಗೂ ಗೊತ್ತು!  ನಿನ್ನ ಇಂಚಿಂಚೂ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಸಫಲನಾದೇನೆಂಬ ನಂಬಿಕೆಯಿದೆ. ತಲೆಯಲ್ಲಿ ಸಾವಿರ ಕನಸುಗಳಿವೆ ಹುಡುಗಿ, ಹೂಂ ಕಣೋ ಸಾದಿಸ್ತೀಯ ಅನ್ನೋಕೊಂದು ಜೀವ ಜೊತೆಗೆ ಬೇಕಿದೆ. ಸ್ಪೂರ್ತಿಯ ಸೆಲೆಯಾಗಿ, ಕನಸಿಗೆ ನೆಲೆಯಾಗಿ. ಸುಳ್ಳು ಹೇಳಿ ನಿನ್ನ ಪಡೆವ ಜರೂರತ್ತೇನೂ ಇಲ್ಲ, ಆದರೂ ಅಗತ್ಯ ಬಿದ್ರೆ ಆಗಸದಷ್ಟು ಸುಳ್ಳು ಹೇಳಿಯಾದರೂ ನಿನ್ನ ಪ್ರೀತಿಸ್ಲೇಬೇಕೆಂಬ ಹಟಕ್ಕೆ ಬಿದ್ದಿದೆ ಮನಸು. Convince ಮಾಡೋಕೆ ಆಗ್ದಿದ್ರೆ confuse ಮಾಡಬೇಕಂತೆ! - ಯಾರೋ ತಿಳಿದೋರು ಹೇಳಿರೋ ಮಾತು. ಸಮಯ ಸುಕಾಸುಮ್ಮನೆ ಕಳೆಯುತ್ತಿದೆ, ನಂಗೊತ್ತು Time ಬೇಕು ನಂಗೆ ಅಂತೀಯ ನೀನು; ಅದಕ್ಕೂ ಸಿದ್ದನಿದ್ದೇನೆ - ಎಷ್ಟಾದರೂ ಟೈಮ್ ತಗೋ ಆದ್ರೆ 'ನೀನು ನನ್ನೊಳು ಅಂತ ಬರವಸೆ ಕೊಡು!' ನಿನ್ನ ಕಣ್ಣಲ್ಲೇ ನನ್ನಿಡೀ ಜೀವನವನ್ನ ನೋಡಿಕೊಂಡು ಬಿಡ್ತೀನಿ, ಇದೊಂದು ಜನ್ಮ ಜತೆಗಿದ್ದುಬಿಡು.



ಬೊಗಸೆತುಂಬ ಪ್ರೀತಿ, ಕೆನ್ನೆಮೇಲಿನ ನಗು, ಕಂಗಳಲ್ಲಿ ಖುಷಿ ಮಾಯದಂತೆ ಕಾಯ್ದುಬಿಡುತ್ತೇನೆ, ನನ್ನಾಣೆ. ಸಿಕ್ತೀಯಾ ಅಂತಾದ್ರೆ - ಕಾಯ್ತೀನಿ ಕಣೆ - ಕಾಯೋದ್ರಲ್ಲೂ ಖುಷಿಯಿದೆ ಅಂದೋನು ನಾನು.

ನಿನ್ನ ಹಂಸ ಪಾದಕ್ಕೆ ಗೆಜ್ಜೆಕಟ್ಟಿಯಾಗಿದೆ, ಜಲಪಾತದ ಜಡೆಗೆ ಮಲ್ಲಿಗೆ ಮುಡಿಸಬೇಕೆಂಬ ಬಯಕೆ ಹೃದಯದಿಂದ ಇಣುಕುತ್ತಿದೆ!
ನೀನೆಷ್ಟು ಹತ್ತಿರವಿದ್ದೀಯೋ ಅಷ್ಟು ಖುಷಿಯಾಗಿರ್ತೀನಿ, ತೀರ ಪಕ್ಕದಲ್ಲೇ ಇರಬೇಕೆಂಬ ಬಯಕೆಯೇನಿಲ್ಲ. ನೀನಾಗಿಯೇ ಬಂದು ನನ್ನೆದೆಯಮೇಲೆ ತಲೆಯಿಟ್ಟು ವಿರಮಿಸಿದರೆ, ನನಗಾಗೋ ಖುಷಿಯ ಆ ಬಗವಂತ ಬಲ್ಲ! ಜೀವವೀಣೆ ಜಲ್ಲೆಂದ ಸದ್ದು ನಮ್ಮಿಬ್ಬರಿಗಷ್ಟೇ ಕೇಳಿಸಬೇಕು, ಅವತ್ತಿನ ಸಂಬ್ರಮಕ್ಕೆ ಹೃದಯ ಹಾಡಬೇಕು; ಒಮ್ಮೆ ಕಿವಿಯಿಟ್ಟು ನೋಡು, ಕೇಳು!
ನಾನ್ಯಾಕೆ ಸದಾ ಖುಷಿಯಾಗಿರ್ತೀನಿ ಗೊತ್ತೇನೆ? ನಿನ್ನ ಕಂಡ ದಿನದಿಂದ ನಾನು Happy Man :)

ನಾನಂತೂ ಪ್ರೀತ್ಸಿದ್ದೀನಿ, ನೀನು?-ಗೊತ್ತಿಲ್ಲ, ಹೋಗ್ಲಿ ಬಿಡು; Atleast ನಮ್ಮಿಬ್ಬರ ಈ ಪ್ರೀತಿಯನ್ನದ್ರೂ ಪ್ರೀತ್ಸಿಬಿಡು!



ಸುಮ್ನೆ ನಿನ್ನೆ ನೋಡ್ತಾ ಕೂತಿರಬೇಕು, ನೀನೇ ಒಂಥರಾ ಖುಷಿ - ಅದಕ್ಕೇ ಹೇಳಿದ್ದು ಜತೆಗಿರು ಅಂತ. ನೀನೊಂದು ನಗು ನಕ್ಕರೆ - ಹೃದಯದಲ್ಲಿ ಪ್ರಣತಿಯ ಹಚ್ಚಿಟ್ಟು ಪುಟ್ಟ ಮಗುವೊಂದು ನಡೆದು ಹೋದಂತ ಅನುಭವ! ನಿನ್ನದೊಂದು ಕಣ್ಣ ನೋಟದಲ್ಲಿ ಬಿಂಬವಾಗಿರ್ತೀನಲ್ಲ ಸಾಕು ಕಣೆ - ಆ ಕ್ಷಣಕ್ಕೆ ಜೀವನ ಸಾರ್ಥಕ. ಬಹುಷಃ ನೀನು ನಡೆವುದ ನೋಡಿ ಆಮೇಲೆ ಅದಕ್ಕೆ 'ವೈಯಾರ' ಅಂತ ಹೆಸರಿಟ್ಟರೆನೋ? I love the way you walk! ನಿನ್ನೆಡೆಗಿನ wow ಎಂದಿಗೂ ಕಮ್ಮಿಯಾಗಲಾರದು. ನಂಗೊತ್ತು ಇಂಥ ಪತ್ರವನ್ನ ನಾನು ಸಾವಿರ ಬರೆಯಬಲ್ಲೆ, ನಿನ್ನೆಡೆಗಿನ ಪ್ರೀತಿ ಆಮೇಲೂ ಉಳಿದಿರುತ್ತೆ, ಅಷ್ಟೂ ನಿಂಗೆ ಬರ್ದಿದ್ದು ಕಣೆ ಅದನ್ನ ನೀನೇ ತಿಳ್ಕೋಬೇಕು, ತೀರ ಅದಕ್ಕೂ ಸಮಜಾಯಷಿ ಕೇಳಬೇಡ! ಯಾವತ್ತಿಗೂ ನೀನು ನನ್ನ ಕುತೂಹಲ, ಅದೆಷ್ಟೇ ಹುಡುಕಿದರೂ, ನಿನ್ನೆಡೆಗಿನ ಅಧ್ಯಯನಾಸಕ್ತಿ ಕಡಿಮೆಯಾಗಲಾರದು. ನನ್ನ ನಿರಂತರ ತಪನೆಯನ್ನ ಆದಷ್ಟು ಬೇಗ ಪ್ರೀತಿ ಅಂತ ಒಪ್ಪಿಕೊಂಡುಬಿಡು.. ಹೇಗಿದ್ದೀಯೋ ಹಾಗೆ ಇರು - ಪ್ರೀತ್ಸು ಅಷ್ಟೇ!
                 
              - You don't have to be perfect; to be perfect for me :)
                                                                                                            - ನಿನ್ನವ




         

ಶುಕ್ರವಾರ, ಜೂನ್ 29, 2012

ಬೆಳೆಯುವ ಸಿರಿ ಮೊಳಕೆಯಲ್ಲಿ!



ಮೊದಲರ್ಧ ಫೇಸ್-ಬುಕ್ ನಿಂದ ಆಯ್ದುಕೊಂಡದ್ದು, ಇನ್ನರ್ಧ ಬೃಂದಾವನಂ ಚಿತ್ರದ್ದು! http://on.fb.me/Mf7n2i
ಹುಡುಕುತ್ತಾ ಹೋದ್ರೆ ಇಂತವೆಷ್ಟೋ! ಸಧ್ಯಕ್ಕೆ ನನಗೆ ಸಿಕ್ಕಿದ್ದು ಇದು :) 'ದಿಲ್ ಖುಷಿ'ಯಾಗಿರಿ...


ಶನಿವಾರ, ಜೂನ್ 16, 2012

ದೇಶ ಉದ್ಧಾರ ಆದಂಗೇ!

 ಯಾರು ಹಿತವರು ನಮಗೆ?
 

ಯೂ.ಪೀ.ಎ(U'Pee'A) ತನ್ನ ಭಯಂಕರ ಮೀಟಿಂಗು ಮುಗಿಸಿ ಕೊನೆಗೂ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನ ಆಯ್ಕೆ ಮಾಡಿ ಮುಗಿಸಿದೆ. ನಾನೀಗ ಹೋಗಿ ಅನೌನ್ಸ ಮಾಡ್ತೀನಿ ಸುಮ್ನೆ ನನ್ಹಿಂದೆ ನಿಂತ್ಗಂಡಿರು  ಮೋಹನಾ ಅಂದಿರ್ಲಿಕ್ಕೆ ಸಾಕು ಇಟಲಿಯಮ್ಮ! ನಿರೀಕ್ಷೆಯಂತೆ ಹೀಗೆ ಆಯ್ಕೆಯಾದ ಅಭ್ಯರ್ಥಿ ಬೇರಾರೂ ಅಲ್ಲ; ಆತ ಪ್ರಣಬ್ ಮುಖರ್ಜಿ, ವಿತ್ತ ಸಚಿವ. ದೇಶದ ಆರ್ಥಿಕತೆ ನೆಲೆಕಚ್ಚಿ ಕುಳಿತಿರುವಾಗ ಸದರಿ ಹುದ್ದೆ ಅಲಂಕರಿಸಿರುವ ಇವರನ್ನ ದೇಶದ ಮಹೋನ್ನತ ಪದವಿಗೆ ಅಣಿಗೊಳಿಸುತ್ತಿರುವುದು ಹಾಸ್ಯಾಸ್ಪದ.ಅಂದಹಾಗೆ ಹಿಂದೊಮ್ಮೆ ಶ್ರೀಯುತರು ಚಾನ್ಸ್ ಕೊಡಿ ಅಂದಾಗ ಇಟಲಿಯಮ್ಮ ಟೈಮ್ ಬರ್ಲಿ ತಡ್ಯಪ್ಪ ಅಂದಿದ್ರು, ಕೊಟ್ಟಮಾತಿಗೆ ತಪ್ಪದೆ ಈಗ ಈ ನಿರ್ಧಾರಕ್ಕೆ ಬಂದಿರಬೇಕು! ಕಾಂಗ್ರೆಸ್ನಲ್ಲಿ ಡಿಸಿಷನ್  ಮೇಕಿಂಗ್ ಪವರ್ರು ಇಟಲಿಯಮ್ಮನ್ನ ಬಿಟ್ರೆ ಬೇರಾರಿಗೂ ಇಲ್ಲದ ಕಾರಣ ನೋ ಒಬ್ಜೆಕ್ಷನ್ :P

ಅಂದಹಾಗೆ ನಮ್ಮ ದೇಶದ ಪ್ರಧಾನ ಮಂತ್ರಿ, ಅಂದರೆ  ಮನಮೋಹನ 'ಸಿಂಗಂ' ಅವರ ಹೆಸರೂ ಕೇಳಿಬಂದಿತ್ತು, ಅದೊಂತರ ಈಗ್ಲೇ ರಬ್ಬರ್ ಸ್ಟಾಂಪ್ ಆಗಿರೋದ್ರಿಂದ - ಇದ್ದಲ್ಲೇ ಇರ್ಲಿ ಅಂತ ಆಮೇಲೆ ಕೈಬಿಡಲಾಯ್ತು! ನಮ್ಮ ರಾಷ್ಟ್ರದ ಸದ್ಯದ ಸರ್ವೋಚ್ಚ ಹುದ್ದೆ ಮೇಲೆ ಕುಳಿತಿರುವ  ಪ್ರತಿಭಾ ದೇವಿ ಸಿಂಗ ಪಾಟೀಲ ಅವ್ರು ಭೂಪಟದ ಯಾವ್ದೋ ಮೂಲೆಯಲ್ಲಿ ಪ್ರವಾಸ ನಿರತರಾಗಿದ್ದು, ಎಲ್ಲಾ ನಿಧಾನವಾಗಿ ಆಗ್ಲಿ ಬಿಡಿ ಅಲ್ಲೀವರ್ಗೂ 'ಮೇ ಔರ್ ಏಕ್ ರೌಂಡ್ ಮಾರ್ ಕೆ ಆವೂಂಗಿ' (ಇನ್ನೊಂದ್ ಬಾರಿ ಸುತ್ಕೊಂಡು ಬರ್ತೀನಿ) ಅಂತ ಮೆಸೇಜ್ ಕಳಿಸಿದ್ದಾರಂತೆ!

ಲೋಕಸಭೆಯ ಸ್ಪೀಕರ್ ಆಗಿದ್ದ ಸೋಮನಾಥ ಚಟರ್ಜಿ ಹೆಸರೂ ಹೀಗೆ ಬಂದು ಹಾಗೇ ಹೋಯ್ತು. ಆಮೇಲೆ ಯಾರೋ ಜೆ.ಡಿ.ಎಸ್'ನ ಕೃಷ್ಣ ಅನ್ನೋರು ದೂಳುಪುತ್ರ ದೇವೇಗೌಡ ಅವ್ರು ಸೂಕ್ತ ವ್ಯಕ್ತಿ ಕಣ್ರೀ ಅಂತ ದೊಡ್ಡ ಜೋಕೊಂದನ್ನು ತೇಲಿಬಿಟ್ರು. ರಾಮಕೃಷ್ಣ ಹೆಗಡೆ ಅವ್ರಿಗೆ ಸಿಗಬೇಕಿದ್ದ ಪ್ರಧಾನಿ ಹುದ್ದೇನಾ ಇವ್ರು ವಕ್ಕರಿಸಿದ್ದು ಯಾಕೋ ನೆನಪಾಗಿ ಬೇಸರವಾಯ್ತು :( ಇದ್ರ  ಜತೆ ಯಾವ್ದೋ ಶಾಲೆಯ ಮೇಷ್ಟ್ರು ಒಬ್ರು ಗೌಡ್ರು ಹೋದರಂತೆ ಅಂತ ಮೌನಾಚರಣೆ ಮಾಡಿಸ್ಬಿಟ್ಟಿದ್ರಂತೆ - ಎಷ್ಟೋ  ಜನ ಉಸ್ಸಪ್ಪ -ಕೊನೆಗೂ-ಅಂದೋರು, ಸುಳ್ಳು ಸುದ್ದಿ ಅಂತ ಗೊತ್ತಾಗಿ ಬೇಸರ ಪಟ್ರು ಅಂತ ವರದಿಯಾಗಿದೆ :P

ಮಮತಾಮಯಿಯ ತ್ರಣಮೂಲ ಮಾತ್ರ ಕಾದು ನೋಡ್ತೀನಿ ಅಂದದ್ದು, ಏನಾರ ಸಿಗತ್ತಾ(ರಾಜ್ಯಕ್ಕೆ!) ಅಂತ ನೋಡ್ಕ್ಯಂಡು ನಿರ್ಧಾರ ತಗೊಳ್ಳೋ ಸಾದ್ಯತೆಗಳು ದಟ್ಟವಾಗಿವೆ.ಇನ್ನು ಎಸ್ಪಿ ಎಂಬ ದೊಡ್ಡ(ದಡ್ದ) ಪಕ್ಷ ಪ್ರಸಾದ ಸ್ವೀಕರಿಸಿ ಪ್ರಣಬ್'ಗೆ ಜೈ ಅಂದುಬಿಟ್ಟಿದೆ. ಎಂಬಲ್ಲಿಗೆ ಇಟಲಿಯಮ್ಮನ ಮನೆಯ ಮಾಲಿಗಳೂ ಕೂಡ ಹೊಸಬಟ್ಟೆ ಹೊಲಿಸಿಕೊಂಡು ನಾವ್ ರೆಡಿ ಅನ್ನೋಕೆ ಹೋಗಿದ್ರಂತೆ. ಇತ್ತ ಮನಮೊಹನರು ಕೂಡ ತಮ್ಮ ಹೆಸರು ತೇಲಿಬಂದದ್ದು ಕೇಳಿ 'ಬಯಸದೆ ಬಳಿ ಬಂದೇ' ಹಾಡು ಹಾಡಿಕೊಂಡಿದ್ರಂತೆ. ಇದನ್ನ ಕೇಳಿ ಇಟಲಿಯಮ್ಮ ಮೋನು ಸುಮ್ನಿರಪ್ಪಾ, 2014ರ ವರೆಗೂ ಹಿಂಗೇ ಎಂಗೇಜ್ ಆಗಿರು ಅಂದಳಂತೆ! :P

ಮೈತುಂಬ ಹಗರಣ ಹೊತ್ತು ಹೆಣಗಾಡುತ್ತಿರುವ ಡಿ.ಎಂ.ಕೆ_ಯ ಕೊಂಗ ಕರುಣಾನಿಧಿ, ಹಮೀದ್ ಅನ್ಸಾರಿ ಓಕೆ ಕಣ್ರೀ ಅಂತ ಸುಮ್ನೆ ತಮಾಷೆಗೆ ಹೇಳಿತ್ತಾದ್ರು, ತಮ್ಮ  ಮೇಲಿರೋ ಎಲ್ಲ ಕೇಸ್'ಗಳನ್ನ ವಸಿ ನೋಡ್ಕ್ಯಂಡ್ರೆ ನಿಮ್ಮ ಹಸಾನೇ ಮುಂದೆ ಹೋಗ್ಲಿ, ನಮ್ ಹೋರಿನೇ ಹಿಂದೆ ಬರುತ್ತೆ ಅಂತ ಹೇಳ್ಬಿಡ್ತಂತಪ್ಪ! ದೇಶ ಯಕ್ಕುಟ್ಟೋದ್ರು ಪರ್ವಾಗಿಲ್ಲ - ತಮ್ ಕೆಲ್ಸಾ ಆದ್ರೆ ಸಾಕು ಅಂತ ಎಲ್ಲ ರಾಜಕೀಯ ಪಕ್ಷಗಳೂ ಅನ್ಕೊಂಡಿರೋದಕ್ಕೆ 'ಪ್ರಣಬ್ ಯೂ ಆರ್ ಲಕ್ಕಿ'!

ಮಧ್ಯೆ ಕೇಳಿಬಂದ ಹೆಸರುಗಳು ದೇಶದ ಜನತೆಯನ್ನ ನಿಟ್ಟುಸಿರು ಬಿಡುವಂತೆ/ಉಸಿರಾಡುವಂತೆ ಮಾಡಿದ್ದವು. ಭಾರತದ ಟೆಲಿಕಾಂ ಪಿತಾಮಹ ಸ್ಯಾಮ್ ಪಿತ್ರೋಡಾ ಒಂದು ಒಳ್ಳೆ ಆಯ್ಕೆ ಆಗಬಹುದಿತ್ತು, ಹಾಗಾಗಲಿಲ್ಲ. ಆಮೇಲೆ ಇನ್ಫಿಯ ನಾರಾಯಣಮೂರ್ತಿ ಅವರ ಹೆಸರು ಚಾಲ್ತಿಗೆ ಬಂತು, ಅದೂ ಒಂದೇಟಿಗೆ ಓಕೆ ಅನ್ನೋಹಾಗಿತ್ತು. ಏನೇನೋ ಆಗಿ, ಕೊನೆಗೆ ಅವರನ್ನೇ ಮಾತಾಡಿಸಿದ್ರೆ ಅವೆಲ್ಲ ಇಲ್ಲ ಕಣ್ರೀ, ಈ ರಾಜಕಾರಣಿಗಳೇ ಸೂಕ್ತ ವ್ಯಕ್ತಿಯನ್ನ ಆಯ್ಕೆ ಮಾಡ್ಲಿ ಬಿಡಿ(ನಿಜಾನ !?) ನೀವೇಕೆ ಸುಮ್ನೆ ಇರುವೆ ಬಿಟ್ಗಂತೀರಾ ಅಂದ್ಬಿಟ್ರು!

ಸಭ್ಯ-ಸಜ್ಜನ ಮಾಜಿ ರಾಷ್ಟ್ರಪತಿ ಕಲಾಂ ಅವ್ರ ಹೆಸ್ರು - ಹಿಂದೆ ಅವ್ರನ್ನ ಆಯ್ಕೆ ಮಾಡಿದ್ದ ಏನ್.ಡಿ.ಎ  ಪಾಳೆಯದಿಂದಲೇ ಕೇಳಿ ಬಂತು.ಅಬ್ಬ ಬಿ .ಜೆ.ಪಿ ಏನೋ ಒಳ್ಳೆ ಕೆಲ್ಸಾ ಮಾಡ್ತಿದೆ ಅಂತ ಜನ ಆಸೆ ಇಟ್ಗೊಂಡಿದ್ರು. ಆದ್ರೆ ವೋಟಿಂಗ್ ಲೆಕ್ಕಾಚಾರದ ಪ್ರಕಾರ ಕಲಾಂ ಗೆಲ್ಲೋದು ಕಷ್ಟ ಅಂತ ಅನ್ನಿಸಿ, ಅದೀಗ  ದಿಕ್ಕೆಟ್ಟು ಕುಳಿತಿದೆ. ಇತರ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳೋ ಆಲೋಚ್ನೆ ಬಿಟ್ಟು ಸುಮ್ನೆ ಕಲಾಂ'ಗೆ ಬೆಂಬಲ ಸೂಚಿಸಿದರೆ ರಾಷ್ಟ್ರಕ್ಕೆ - ಜನಕ್ಕೆ ತುಂಬಾ ಒಳ್ಳೆಯದು.  ಅತ್ತ  ಬೇಸತ್ತು ಕಲಾಂ, ವಿತ್ತ ಸಚಿವರ ವಿರುದ್ದ ನಾನು ನಿಲ್ಲೋದಿಲ್ಲ ಬಿಡಿ ಅಂತಿದಾರೆ. ಭವ್ಯ ಭಾರತ ದೇಶದ ಜನರ ರಕ್ತ ಕುದಿಯುವ ಬದಲು, ತಣ್ಣಗಾಗಿ ಬಿಟ್ಟಿರುವುದು ಮಾತ್ರ ವಿಪರ್ಯಾಸ :(

ಓದಿದ ನೀವು - ಅಭಿಪ್ರಾಯ ಹಂಚಿಕೊಳ್ಳಿ, ಮಿತ್ರರಿಗೆ ಕೊಟ್ಟು ಓದ್ಸಿ, like/share ಮಾಡಿ. ಒಟ್ಟಾರೆ ಏನು ಒಳ್ಳೇದು ಅನ್ಸುತ್ತೋ ಅದನ್ನ ಮಾಡಿ!

- ಪ್ರಸಾದ್